ಟರ್ಪೀನುಗಳು -
	ಸಸ್ಯಪ್ರಪಂಚದಲ್ಲಿ ಮಾತ್ರ ಹೆಚ್ಚಿನ ಪರಿಮಾಣದಲ್ಲಿ ದೊರೆಯುವ ಪರಿಮಳ ವಸ್ತುಗಳು. ಸುಗಂಧ ಎಣ್ಣೆಗಳಲ್ಲಿ (ಎಸೆನ್ಷಿಯಲ್ ಎಣ್ಣೆಗಳು) ಸರಳ ಟರ್ಪೀನುಗಳು (ಮಾನೋ ಮತ್ತು ಸೆಸ್ಕ್ವಿ ಟರ್ಪೀನುಗಳು) ಇವೆ. ಬಾಷ್ಪಶೀಲವಸ್ತುವಾದ ಟರ್ಪಂಟೈನ್ ಎಣ್ಣೆ ಮತ್ತು ಘನವಸ್ತುವಾದ ಕರ್ಪೂರ ಟರ್ಪೀನುಗಳಿಗೆ ಉದಾಹರಣೆಗಳು. ಟರ್ಪೀನುಗಳನ್ನು ಸಸ್ಯಗಳ ರಸ ಮತ್ತು ಅಂಗಾಂಶಗಳಿಂದ ಸುಲಭವಾಗಿ ಬೇರ್ಪಡಿಸಬಹುದು. ಬಾಷ್ಪಶೀಲವಲ್ಲದ ಡೈ-ಮತ್ತು ಟ್ರೈ-ಟರ್ಪೀನುಗಳನ್ನು ಗಿಡಗಳ ಗೋಂದು ಮತ್ತು ಧೂಪಗಳಿಂದ ಪಡೆಯಲಾಗಿದೆ. ಟೆಟ್ರಟರ್ಪೀನುವರ್ಗಗಳ ಮುಖ್ಯ ಪ್ರತಿನಿಧಿಗಳೆಂದರೆ ಕೆರೋಟಿನಾಯ್ಡುಗಳು. ಸಾಮಾನ್ಯವಾಗಿ ಇವನ್ನು ಬೇರೆ ವರ್ಗದ ವಸ್ತುಗಳೆಂದೇ ಪರಿಗಣಿಸುವ ರೂಢಿ ಇದೆ. ನೈಸರ್ಗಿಕ ರಬ್ಬರ್ ಒಂದು ಬಹುಟರ್ಪೀನ್.

	ಬಹುತೇಕ ಟರ್ಪೀನ್ ಹೈಡ್ರೋಕಾರ್ಬನ್ನುಗಳನ್ನು (ಅ5ಊ8 ) ಟಿ ಎಂಬ ಸೂತ್ರದಿಂದ ನಿರ್ದೇಶಿಸಬಹುದು. 
ಟಿನ ಬೆಲೆಗಳನ್ನು ಅನುಸರಿಸಿ ಇವನ್ನು ಕೆಳಗೆ ಕಾಣಿಸಿರುವಂತೆ ವರ್ಗೀಕರಿಸಲಾಗಿದೆ:
	1. ಮಾನೋ ಟರ್ಪೀನುಗಳು, ಅ10ಊ16, ಟಿ=2
	2. ಸೆಸ್ಕ್ವಿಟರ್ಪೀನುಗಳು, ಅ15ಊ24, ಟಿ=3
	3. ಡೈ ಟರ್ಪೀನುಗಳು, ಅ20ಊ32, ಟಿ=4
	4. ಟ್ರೈ ಟರ್ಪೀನುಗಳು, ಅ30ಊ48, ಟಿ=6
	5. ಟೆಟ್ರ ಟರ್ಪೀನುಗಳು, ಅ30ಊ48, ಟಿ=6
	6. ಬಹುಟರ್ಪೀನುಗಳು, (ಅ5ಟಿಊ8ಟಿ,=(ಅ5ಊ8)ಟಿ

	ಈ ಹೈಡ್ರೊಕಾರ್ಬನ್ನುಗಳಲ್ಲದೆ ಪ್ರತಿಯೊಂದು ವರ್ಗದ ಸಂಯುಕ್ತಗಳ ಆಕ್ಸಿಜನ್ ಉತ್ಪನ್ನಗಳು ಸಹ ನಿಸರ್ಗದಲ್ಲಿ ದೊರೆಯುತ್ತವೆ. ಇವು ಮುಖ್ಯವಾಗಿ ಅಲ್ಕೊಹಾಲುಗಳು, ಆಲ್ಡಿಹೈಡುಗಳು ಮತ್ತು ಕೀಟೋನುಗಳು. ಟರ್ಪೀನ್ ರಸಾಯನಶಾಸ್ತ್ರದ ಬೆಳೆವಣಿಗೆಯ ತರುಣದಲ್ಲಿ ಈ ಹೆಸರನ್ನು ಅ10ಊ16 ಸೂತ್ರಕ್ಕೆ ಸರಿಹೊಂದುವ ಹೈಡ್ರೊಕಾರ್ಬನ್ನುಗಳಿಗೆ ಮಾತ್ರ ಅನ್ವಯಿಸಲಾಗುತ್ತಿತ್ತು. ಈಗ ಸಾರ್ವತ್ರಿಕ ಬಳಕೆಯ ಫಲವಾಗಿ ಟರ್ಪೀನ್ ಎಂಬ ಪದವನ್ನು (ಅ5ಊ8)ಟಿ ಸೂತ್ರಕ್ಕೆ ಹೊಂದಿಕೊಳ್ಳುವ ಎಲ್ಲ ಸಂಯುಕ್ತಗಳಿಗೆ ಬಳಸಲಾಗುತ್ತಿದೆ. ಈಚೀಚೆಗೆ ಈ ವರ್ಗದ ಎಲ್ಲ ಸಂಯುಕ್ತಗಳನ್ನು ಟರ್ಪೀನಾಯ್ಡುಗಳೆಂದು ಅ10ಊ16 ಸೂತ್ರಕ್ಕೆ ಹೊಂದಿಕೊಳ್ಳುವ ಹೈಡ್ರೊಕಾರ್ಬನ್ನುಗಳನ್ನು ಟರ್ಪೀನುಗಳೆಂದೂ ಕರೆಯುವ ಪ್ರವೃತ್ತಿ ಹೆಚ್ಚುತ್ತಲಿದೆ.

	ಕೆಲವೇ ಟರ್ಪೀನುಗಳ ವಿನಾ ಉಳಿದೆಲ್ಲ ಟರ್ಪೀನುಗಳ ಉಷ್ಣವಿಭಜನೆಯಿಂದ ಐದು ಇಂಗಾಲ ಪರಮಾಣುಗಳಿರುವ (ಅ5) ಐಸೊಪ್ರೀನ್ ದೊರೆಯುತ್ತದೆ. ಇಂಥ ಪ್ರಾಯೋಗಿಕ ಆಧಾರದ ಮೇಲೆ ಎಲ್ಲ ಟರ್ಪೀನುಗಳು ಐಸೊಪ್ರೀನ್ ಮಾನಗಳಿಂದ ರೂಪಿತವಾಗಿವೆ ಎಂಬ ಐಸೊಪ್ರೀನ್ ನಿಯಮವನ್ನು ಮುಂದಿಡಲಾಯಿತು. ಈ ರೀತ್ಯ ಟರ್ಪೀನುಗಳು ಎಂಬ ವರ್ಗಕ್ಕೆ ಯಾವುದೊಂದು ಸಂಯುಕ್ತವನ್ನು ಸೇರಿಸಬೇಕಾದರೆ ಅದನ್ನು ಐಸೊಪ್ರೀನ್ ಮಾನಗಳಂತೆ ವಿಭಜಿಸಲು ಸಾಧ್ಯವಾಗಬೇಕು ಎಂಬುದು ಕಡ್ಡಾಯವಾದ ನಿಯಮವಾಯಿತು.

ಚಿತ್ರ-1

ಇಷ್ಟೇ ಅಲ್ಲದೆ ಟರ್ಪೀನುಗಳಲ್ಲಿ ಐಸೊಪ್ರೀನ್ ಮಾನಗಳು ತಲೆ-ಬಾಲ ಸಾಂದ್ರೀಕರಣದಿಂದ (ಕಂಡೆನ್ಸೇಷನ್) ರೂಪಿತವಾಗಿರುತ್ತವೆ. ಹೀಗಾಗಿ ಟರ್ಪೀನುಗಳನ್ನು ಐಸೊಪ್ರೀನ್ ಮಾನಗಳ ತಲೆ-ಬಾಲ ಸಾಂದ್ರೀಕರಣದಿಂದ ರೂಪಿತವಾಗುವ ಸಂಯುಕ್ತಗಳೆಂದು ನಿರ್ದೇಶಿಸಬೇಕಾಗುತ್ತದೆ. ಆದರೆ ಈ ನಿಯಮಕ್ಕೆ ಅಪವಾದಗಳೆನಿಸುವ ಅನೇಕ ಸಂಯುಕ್ತಗಳು-ಲಾವಂಡುಲಾಲ್ ಮತ್ತು ಕೆರೋಟಿನಾಯ್ಡುಗಳು-ಟರ್ಪೀನುಗಳು ವರ್ಗಕ್ಕೇ ಸೇರಿವೆ. ಟರ್ಪೀನುಗಳು ಮುಕ್ತಶ್ರೇಣಿಯಂತೆಯೂ ಆವರ್ತ (ಚಕ್ರೀಯ) ಸಂಯುಕ್ತಗಳಂತೆಯೂ ದೊರೆಯುತ್ತವೆ. ಮುಕ್ತಶ್ರೇಣಿ ಮಾನೋಟರ್ಪೀನುಗಳ ಹಾಗೂ ಸೆಸ್ಕ್ವಿಟರ್ಪೀನುಗಳ ರಚನೆಯನ್ನು ಚಿತ್ರ (1)ರಲ್ಲಿ ಕಾಣಿಸಿರುವಂತೆ ಬರೆಯಬಹುದು. 

ಚಿತ್ರ-2

ಏಕಚಕ್ರೀಯ ಟರ್ಪೀನುಗಳು ಆರು ಸದಸ್ಯಗಳಿರುವ ಆವರ್ತವೊಂದನ್ನು ಪಡೆದಿರುತ್ತವೆ. ತಾತ್ತ್ವಿಕವಾಗಿ ಸಾಧ್ಯವಾದ ಅನೇಕ ಆವರ್ತ ರೂಪಗಳ ಪೈಕಿ ಪ್ಯಾರಾಸೈಯಮೀನ್ (ಚಿತ್ರ 2) ಆವರ್ತ ಮಾತ್ರ ಸ್ಥಿರವಾಗಿರುತ್ತದೆ. ಆದ್ದರಿಂದ ಇದೊಂದೇ ರಚನೆ ಮಾತ್ರ ಇರಲು ಸಾಧ್ಯ. ನೈಸರ್ಗಿಕವಾಗಿ ದೊರೆಯುವ ಎಲ್ಲ ಏಕಚಕ್ರೀಯ ಮಾನೋಟರ್ಪೀನುಗಳು ಪ್ಯಾರಾಸೈಮೀನಿನ ಉತ್ಪನ್ನಗಳು. ದ್ವಿಚಕ್ರೀಯ ಟರ್ಪೀನುಗಳಲ್ಲಿ 6 ಸದಸ್ಯಗಳಿರುವ ಒಂದು ಆವರ್ತವೂ 3 ಅಥವಾ 4 ಅಥವಾ 5 ಸದಸ್ಯಗಳಿರುವ ಒಂದು ಆವರ್ತವೂ ಉಂಟು. ಇಂಥ ಸಂಯುಕ್ತಗಳು ಮೂರು ಬಗೆಯ ರಚನೆಗಳನ್ನು ಪಡೆಯಲು ಸಾಧ್ಯ (ಚಿತ್ರ 3).

ಚಿತ್ರ-3

	ಟರ್ಪೀನುಗಳ ಬೇರ್ಪಡೆ : ಸುಗಂಧ ತೈಲಗಳನ್ನು ಉತ್ಪಾದಿಸುವ ಸಸ್ಯಗಳಿಂದ ಟರ್ಪೀನುಗಳನ್ನು ಪಡೆಯಬಹುದು. ಇಂಥ ಗಿಡಗಳಲ್ಲಿ ದಿವಸದ ಯಾವುದೇ ಒಂದು ನಿಶ್ಚಿತ ಗಳಿಗೆಯಲ್ಲಿ ಎಣ್ಣೆಯ ಪರಿಮಾಣ ಹೆಚ್ಚಾಗಿರುತ್ತದೆ. ಸಸ್ಯಗಳಿಂದ ಟರ್ಪೀನುಗಳನ್ನು ಪಡೆಯಲು ಸಾಮಾನ್ಯವಾಗಿ ನಾಲ್ಕು ವಿಧಾನಗಳನ್ನು ಅನುಸರಿಸಲಾಗಿದೆ : (1) ಹಿಂಡುವುದು, (2) ಆವಿ ಆಸವನ, (3) ಬಾಷ್ಪಶೀಲ ದ್ರವಗಳನ್ನು ಬಳಸಿ ನಿಸ್ಸಾರಣ (ಎಕ್ಸ್‍ಟ್ರ್ಯಾಕ್ಷನ್), (4) ಶುದ್ಧಗೊಳಿಸಿದ ತೈಲಗಳಿಂದ ಅಧಿಶೋಷಣ. ಔದ್ಯೋಗಿಕವಾಗಿ ಎರಡನೆಯ ವಿಧಾನಕ್ಕೆ ಪ್ರಾಶಸ್ತ್ಯ ಹೆಚ್ಚು; ಸಸ್ಯವನ್ನು ಬಹು ನಯವಾಗಿ ಪುಡಿ ಮಾಡಿ ಅದರ ಮೂಲಕ ಒತ್ತಡದಲ್ಲಿ ನೀರಿನ ಆವಿಯನ್ನು ಹಾಯಿಸಲಾಗುವುದು. ಹೊರಬರುವ ಆವಿಯನ್ನು ಶೀತಲಿಸಿದಾಗ ಸುಗಂಧ ತೈಲ ಬೇರ್ಪಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸಂಯುಕ್ತ ಅಸ್ಥಿರವಾಗಿದ್ದರೆ ಲಘು ಪೆಟ್ರೋಲಿಯಮ್ಮಿನಿಂದ (50(ಅ)ಯಲ್ಲಿ ನಿಸ್ಸಾರಿಸಲಾಗುವುದು. ನಿಸ್ಸಾರಿತ ಸುಗಂಧ ತೈಲಗಳಲ್ಲಿ ಅನೇಕ ಟರ್ಪೀನುಗಳಿರುತ್ತವೆ. ಇವನ್ನು ಅಂಶಿಕಾಸವನದಿಂದ ಬೇರ್ಪಡಿಸಬಹುದು. ಟರ್ಪೀನ್ ಹೈಡ್ರೊಕಾರ್ಬನ್ನುಗಳು ಪ್ರಾರಂಭದಲ್ಲಿ ಹೊರಬರುತ್ತವೆ. ಅನಂತರ ಟರ್ಪೀನುಗಳ ಆಕ್ಸಿಜನ್ ವುತ್ಪನ್ನಗಳು ಹೊರಬೀಳುತ್ತವೆ. ಒತ್ತಡವನ್ನು ತಗ್ಗಿಸಿ ಆಸವಿಸಿದಾಗ ಸೆಸ್ಕ್ವಿಟರ್ಪಿನುಗಳ ಮಿಶ್ರಣ ದೊರೆಯುತ್ತದೆ. ಅಂಶಿಕಾಸವನದಿಂದ ಇವನ್ನು ಬೇರ್ಪಡಿಸಬಹುದು.

	ಮಾನೊಟರ್ಪೀನುಗಳು : ಮಾನೊಟರ್ಪೀನುಗಳನ್ನು ಅಚಕ್ರೀಯ, ಏಕ-ಮತ್ತು ದ್ವಿ-ಚಕ್ರೀಯ ವಸ್ತುಗಳೆಂದು ವಿಂಗಡಿಸಲಾಗಿದೆ. ಮಿರ್ಸೀನ್, ಓಸಮೀನ್ ಮತ್ತು ಸಿಟ್ರಾಲುಗಳು ಅಚಕ್ರೀಯ ಟರ್ಪೀನುಗಳಿಗೆ ಉದಾಹರಣೆಗಳು. ಔದ್ಯೋಗಿಕವಾಗಿ ಸಿಟ್ರಾಲ್ ಒಂದು ಮುಖ್ಯವಾದ ವಸ್ತು. ಲೆಮನ್‍ಗ್ರಾಸ್ ಎಂಬ ಒಂದು ಜಾತಿಯ ಹುಲ್ಲಿನಿಂದ ತೆಗೆಯುವ ಎಣ್ಣೆಯಲ್ಲಿ ಸಿಟ್ರಾಲ್ 60%-80%ರಷ್ಟಿರುತ್ತದೆ. ಸಿಟ್ರಾಲ್ ಎರಡು ಸಮಾಂಗೀ (ಐಸೊಮರ್) ರೂಪದಲ್ಲಿರಲು ಸಾಧ್ಯ. ವಸ್ತುತಃ ನಿಸರ್ಗದಲ್ಲಿ ಎರಡೂ ರೂಪಗಳು ಕಂಡುಬರುತ್ತವೆ; ಸಿಟ್ರಾಲ್ ಎ (ಜೆರನಿಯಾಲ್, ಕುದಿಬಿಂದು 118( -119( ಅ/20mm.) ಮತ್ತು ಸಿಟ್ರಾಲ್ ಬಿ (ನೆರಾಲ್, ಕುದಿಬಿಂದು 117(- 118( ಅ/20mm.) ಸಿಟ್ರಾಲನ್ನು ಅಸಿಟೋನಿನೊಡನೆ ಸಾಂದ್ರೀಕರಿಸಿ ಅಯನೋನುಗಳನ್ನು ಪಡೆಯಬಹುದು. ಇವು ಓರಿಸ್ ಬೇರಿನಲ್ಲಿ ದೊರೆಯುವ ಐರೋನಿಗೆ (ಅ14ಊ220) ಸಂಬಂಧಿಸಿವೆ. ಸಿಟ್ರಾಲನ್ನು ಅಪಕರ್ಷಿಸಿ ಜೆರನಿಯಾಲ್ ಮತ್ತು ನೆರೋಲುಗಳನ್ನು ಪಡೆಯಬಹುದು. ಇವೆರಡೂ ಆಲ್ಕೊಹಾಲುಗಳು. ಜೆರನಿಯಾಲ್ ರೋಸ್ ಎಣ್ಣೆಯಲ್ಲಿದೆ. ಅದರಲ್ಲಿರುವ ಲಿನಲೂಲ್ (ಎಡಮುರಿ ರೂಪ, ಸಿಟ್ರೋನೆಲ್ಲ ಎಣ್ಣೆಯಲ್ಲಿರುವ ಸಿಟ್ರೋನೆಲಾಲ್ (ಅ10ಊ180)), ಜೆರೇನಿಯಮ್ ಮತ್ತು ರೋಸ್ ಎಣ್ಣೆಗಳಲ್ಲಿರುವ ಸಿಟ್ರೋನೆಲೋಲ್-ಇವು ಅಚಕ್ರೀಯ ಟರ್ಪೀನುಗಳಿಗೆ ಇತರ ಉದಾಹರಣೆಗಳು.

ಚಿತ್ರ-4

ಏಕಚಕ್ರೀಯ ಮಾನೊಟರ್ಪೀನುಗಳು : ಈ ವರ್ಗಕ್ಕೆ ಸೇರಿದ ಸಂಯುಕ್ತಗಳಿಗೆ ಹೆಸರಿಸುವಾಗ ಅವನ್ನು ಹೆಕ್ಸಹೈಡ್ರೊಪ್ಯಾರಾಸೈಮೀನ್ ಅಥವಾ ಪ್ಯಾರಾಮೆಂಥೇನ್ ಎಂಬ ಮೂಲ ವಸ್ತುವಿನ ಉತ್ಪನ್ನಗಳು ಎಂದು ಪರಿಗಣಿಸಲಾಗುತ್ತದೆ. ಪ್ಯಾರಾಮೆಂಥೇನಿನ ರಚನೆಯನ್ನು ಚಿತ್ರ (4) ರಲ್ಲಿ ಕಾಣಿಸಿದೆ.

	ಆಲ್ಫ-ಟರ್ಪಿನಿಯಾಲ್, ಟೆರೆಬಿಕ್ ಆಮ್ಲ, ಕಾರ್ವೋನ್, ಸಿಲ್ವೆಸ್ಟ್ರೀನ್, ಮೆಂಥಾಲ್ ಮತ್ತು ಮೆಂತೋನ್ ಈ ವರ್ಗಕ್ಕೆ ಸೇರಿದ ಕೆಲವು ಸಂಯುಕ್ತಗಳು. ವೈದ್ಯಕೀಯದಲ್ಲಿ ಉಪಯೋಗಕ್ಕೆ ಬರುವ ಮೆಂಥಾಲ್ (ಅ10ಊ20ಔ ) ದ್ಯುತಿ ಪಟುತ್ವವನ್ನು ಪ್ರದರ್ಶಿಸುತ್ತದೆ. ಆದರೆ ನೈಸರ್ಗಿಕವಾಗಿ ಎಡಮುರಿ ರೂಪ ಮಾತ್ರ (ಉದಾಹರಣೆಗೆ ಪೆಪ್ಪರಮಿಂಟ್ ಎಣ್ಣೆಯಲ್ಲಿ) ಕಂಡುಬರುತ್ತದೆ. ಮೆಂಥಾಲ್ ಒಂದು ದ್ವಿತೀಯಕ ಆಲ್ಕೊಹಾಲ್. ಇದರ ರಚನೆಯನ್ನು ಪರಿಶೀಲಿಸಿದಾಗ ದ್ಯುತಿಪಟುತ್ವವಿರುವ ಎಂಟು ರೂಪಗಳಿರಬೇಕು ಎಂದು ತಿಳಿದುಬರುತ್ತದೆ. ವಾಸ್ತವಾಗಿ ಇವೆರಡು ರೂಪಗಳೂ ಕಂಡುಬಂದಿವೆ. ಪೆಪ್ಪರಮಿಂಟ್ ಎಣ್ಣೆಯಲ್ಲಿ ಮೆಂಥೋನ್ ಸಹ ಇದೆ. (-) ಮೆಂಥಾಲನ್ನು ಕ್ರೋಮಿಕ್ ಆಮ್ಲದಿಂದ ಉತ್ಕರ್ಷಿಸಿ ಮೆಂಥೋನನ್ನು ಪಡೆಯಬಹುದು.

	ಪೆನ್ನಿರಾಯಲ್ ಎಣ್ಣೆಯಲ್ಲಿರುವ ಫ್ಯೂಲೆಗೋನ್, ಯೂಕಲಿಪ್ಟಸ್ ಎಣ್ಣೆಯಲ್ಲಿರುವ ಪೈಪೆರಿಟೋನ್ ಈ ವರ್ಗದ ಅಪರ್ಯಾಪ್ತ ಸಂಯುಕ್ತಗಳಿಗೆ ಉದಾಹರಣೆಗಳು. ಪೈಪೆರಿಟೋನನ್ನು ಅಪಕರ್ಷಿಸಿ ಮೆಂಥೋನನ್ನೂ ಉತ್ಕರ್ಷಿಸಿ ಥೈಮಾಲನ್ನೂ ಪಡೆಯಬಹುದು.

	ದ್ವಿಚಕ್ರೀಯ ಮಾನೋಟರ್ಪೀನುಗಳು: ಎರಡನೆಯ ಆವರ್ತದ ಗಾತ್ರದ ಆಧಾರದ ಮೇಲೆ ದ್ವಿಚಕ್ರೀಯ ಮಾನೊಟರ್ಪೀನುಗಳನ್ನು ಮೂರು ಜಾತಿಗಳನ್ನಾಗಿ ವಿಂಗಡಿಸಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ ಇನ್ನೊಂದು ಆವರ್ತ ಆರು ಸದಸ್ಯಗಳುಳ್ಳದ್ದು. ಮೂರು ಮತ್ತು ಆರು ಸದಸ್ಯಗಳಿರುವ ದ್ವಿಚಕ್ರೀಯ ಸಂಯುಕ್ತಗಳಿಗೆ ಥುಜೇನ್ ಮತ್ತು ಕರೇನ್ ಉದಾಹರಣೆಗಳು; ನಾಲ್ಕು ಮತ್ತು ಆರು ಸದಸ್ಯಗಳುಳ್ಳ ಆವರ್ತಗಳಿರುವ ಸಂಯುಕ್ತಗಳಿಗೆ ಪೈನೇನ್; ಐದು ಮತ್ತು ಆರು ಸದಸ್ಯಗಳ ಆವರ್ತಗಳಿರುವ ಸಂಯುಕ್ತಗಳಿಗೆ ಕ್ಯಾಂಫೇನ್ ಮತ್ತು ಐಸೊಕ್ಯಾಂಫೇನ್, ಸ್ವೀಡನ್ನಿನ ಪೈನ್ ಮರದ ಮುಳ್ಳಿನಲ್ಲಿ ಕರೇನ್ ಉಂಟು. ಎರಡನೆಯ ಜಾತಿಗೆ ಸೇರಿದ ಸಂಯುಕ್ತಗಳಿಗೆ ಪೈನೇನ್ ಮೂಲವಸ್ತು. ಕೃತಕವಾದ ಈ ಸಂಯುಕ್ತವನ್ನು ಆಲ್ಫ ಅಥವಾ ಬೀಟ ಪೈನೀನುಗಳ ಅಪಕರ್ಷಣೆಯಿಂದ ಪಡೆಯಲಾಗುತ್ತದೆ. ಪೈನೀನ್ (ಅ10ಊ16 ) ಈ ಜಾತಿಯ ಅತ್ಯಂತ ಮುಖ್ಯ ವಸ್ತು. ಇದು ಟರ್ಪೆಂಟೈನ್ ಎಣ್ಣೆಯಲ್ಲಿ ಎಡಮುರಿ ಮತ್ತು ಬಲಮುರಿ ರೂಪಗಳಲ್ಲಿ ದೊರೆಯುತ್ತದೆ. ಪೈನೀನಿಗೆ ಮೂರು ಸಮಾಂಗಿ  ಮತ್ತು ರೂಪಗಳುಂಟು. ಚಿ-ಪೈನೀನ್ ಎರಡು ದ್ಯುತಿಪಟುತ್ವ ರೂಪಗಳನ್ನು ತಳೆಯುತ್ತದೆ. ಮೂರನೆಯ ಜಾತಿಯ ಸಂಯುಕ್ತಗಳ ಮೂಲವಸ್ತು ಕ್ಯಾಂಫೇನ್. ಇದು ಸಹ ಕೃತಕ ವಸ್ತುವೇ. ಕರ್ಪೂರವನ್ನು (ಕ್ಯಾಂಫರ್) ಅಪಕರ್ಷಿಸಿ ಕ್ಯಾಂಫೆüೀನನ್ನು ಪಡೆಯಬಹುದು. ಜಪಾನ್ ಮತ್ತು ಫಾರ್ಮೋಸ (ಟೈವಾನ್) ದೇಶಗಳಲ್ಲಿ ಬೆಳೆಯುವ ಗಿಡಗಳಿಂದ ದೊರೆಯುವ ಕರ್ಪೂರ ಔದ್ಯೋಗಿಕವಾಗಿಯೂ ವೈದ್ಯಕೀಯವಾಗಿಯೂ ಮುಖ್ಯವಾದ ವಸ್ತು. ಕರ್ಪೂರ ಬಿಳಿಬಣ್ಣದ ಘನವಸ್ತು (ದ್ರವನಬಿಂದು 179(ಅ). ದ್ಯುತಿಪಟುತ್ವಶಾಲಿಯಾದ ಕರ್ಪೂರ ಎಡಮುರಿ ಬಲಮುರಿ ರೂಪಗಳಲ್ಲಿ ನೈಸರ್ಗಿಕವಾಗಿ  ದೊರೆಯುತ್ತದೆ. ಅಲ್ಲದೆ ಇವೆರಡು ರೂಪಗಳ ಸಮತುಲ್ಯ ಮಿಶ್ರಣವಾದ ರೆಸೆಮಿಕ್ ಮಿಶ್ರಣ ಸಹ ನಿಸರ್ಗವಸ್ತು. ಕರ್ಪೂರದ ರಚನೆ ಮತ್ತು ಸಂಶ್ಲೇಷಣೆಯ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆಯಿತು. ಈಗ ಕರ್ಪೂರವನ್ನು ಕೃತಕವಾಗಿ ಸಂಶ್ಲೇಷಿಸಲಾಗುತ್ತಿದೆ. (ನೋಡಿ- ಕರ್ಪೂರ). ಇದನ್ನು ಅಪಕರ್ಷಿಸಿ ಬೋರ್ನಿಯಾಲ್ ಮತ್ತು ಐಸೊಬೋರ್ನಿಯಾಲುಗಳನ್ನು ಪಡೆಯಬಹುದು. ಕ್ಯಾಂಫೀನ್ ಮತ್ತು ಬೋರ್ನಿಲೀನ್ ಈ ಜಾತಿಗೆ ಸೇರಿದ ಅಪರ್ಯಾಪ್ತ ಸಂಯುಕ್ತಗಳು.

	ಸೆಸ್ಕ್ವಿಟರ್ಪೀನುಗಳು: ಸುಗಂಧ ತೈಲಗಳನ್ನು ಆಸವಿಸಿದಾಗ ಹೆಚ್ಚಿನ ಕುದಿ ಬಿಂದುವಿನಲ್ಲಿ ಆವಿಯಾಗುವ ಅಂಶದಲ್ಲಿ ಸೆಸ್ಕ್ವಟರ್ಪೀನುಗಳು ದೊರಕುತ್ತವೆ. ಕೆಲವು ಸಂಯುಕ್ತಗಳ ವಿನಾ ಉಳಿದೆಲ್ಲ ಸೆಸ್ಕ್ವಟರ್ಪೀನುಗಳು ಮೂರು ಐಸೊಪ್ರೀನ್ ಮಾನಗಳ ಸಾಂದ್ರೀಕರಣದಿಂದ ಉತ್ಪತ್ತಿಯಾಗುತ್ತವೆ ಎಂದು ಪರಿಗಣಿಸಬಹುದು. ಇವಲ್ಲಿ ದ್ವಿಬಂಧಗಳಿವೆಯಾಗಿ ಇವು ಅಪರ್ಯಾಪ್ತ ಸಂಯುಕ್ತಗಳು. ರಚನೆಯಲ್ಲಿರುವ ಆವರ್ತಗಳ ಆಧಾರದ ಮೇಲೆ ಇವನ್ನು ನಾಲ್ಕು ಪಂಗಡಗಳನ್ನಾಗಿ ಮರುವಿಂಗಡಿಸಲಾಗಿದೆ.

	ಅಚಕ್ರೀಯ ಸೆಸ್ಕ್ವಿಟರ್ಪೀನುಗಳು: ಫಾರ್ನಿಸೀನ್, ಫಾರ್ನಿಸಾಲ್, ನೆರೋಲಿಡಲ್-ಇವು ಈ ಪಂಗಡಕ್ಕೆ ಸೇರಿದ ಸಂಯುಕ್ತಗಳಿಗೆ ಉದಾಹರಣೆಗಳು. ನೆರೋಲಿಡಾಲ್ ಮತ್ತು ಫಾರ್ನಿಸಾಲುಗಳು ಸಮಾಂಗಿಗಳು (ಐಸೊಮರ್ಸ್). ನೆರೋಲಿಡಾಲ್ ನೆರೋಲಿ ಎಣ್ಣೆಯಲ್ಲಿ ಬಲಮುರಿ ರೂಪದಲ್ಲಿ ದೊರೆಯುತ್ತದೆ. ಇದನ್ನು ಸಂಶ್ಲೇಷಿಸಲಾಗಿದೆ.

	ಏಕಚಕ್ರೀಯ ಸೆಸ್ಕ್ವಿಟರ್ಪೀನುಗಳು: ಮ್ಹಿರ್ ಮತ್ತು ಇತರ ಕೆಲವು ಎಣ್ಣೆಗಳಲ್ಲಿ ದೊರೆಯುವ ಬಿಸ್‍ಬೋಲೇನ್, ಶುಂಠಿ ಎಣ್ಣೆಯಲ್ಲಿರುವ ಜಿಂಜಿ ಬಿರೀಸ್ ಈ ಪಂಗಡಕ್ಕೆ ಸೇರಿವೆ. ಬಿಸ್‍ಬೊಲೇನ್ ಚಿ -, ಮತ್ತು  ಸಮಾಂಗಿಗಳ ರೂಪಗಳಲ್ಲಿ ದೊರೆಯುತ್ತದೆ. ದ್ವಿಚಕ್ರೀಯ ಸೆಸ್ಕ್ವಿಟರ್ಪೀನುಗಳಿಗೆ ಕ್ಯುಬೆಟ್ ಎಣ್ಣೆಯಲ್ಲಿರುವ ಕ್ಯಾಡಿನೀನ್, ಸಿಲೆರಿ ಎಣ್ಣೆಯಲ್ಲಿರುವ ಸೆಲಿನೀನ್, ಯೂಕಲಿಪ್ಟಸ್ ಎಣ್ಣೆಯಲ್ಲಿರುವ ಯೂಡೆಸ್ಮಾಲ್ ಉದಾಹರಣೆಗಳು. ಅನೇಕ ಸುಗಂಧ ತೈಲಗಳಲ್ಲಿ ಅಸೂಲೀನ್ ಎಂಬ ವರ್ಣರಂಜಿತ ವಸ್ತುಗಳಿವೆ. ಇವು ಸಹ ಸೆಸ್ಕ್ವಟರ್ಪೀನುಗಳೇ. ಈ ಕುಟುಂಬಕ್ಕೆ ಸೇರಿದ ಅಸೂಲೀನಿನಲ್ಲಿ ಏಳು ಸದಸ್ಯಗಳಿರುವ ಒಂದು ಆವರ್ತವೂ ಐದು ಸದಸ್ಯಗಳಿರುವ ಇನ್ನೊಂದು ಆವರ್ತವೂ ಬೆಸೆದುಕೊಂಡಿರುವುವು

	ಡೈ ಟರ್ಪೀನುಗಳು: ಅಚಕ್ರೀಯ ಡೈ ಟರ್ಪೀನುಗಳ ವರ್ಗಕ್ಕೆ ಫೈಟಾಲ್ ಒಂದು ಉದಾಹರಣೆ. ಇದನ್ನು ಕ್ಲೋರೊಫಿಲ್ಲಿನ ಜಲವಿಶ್ಲೇಷಣೆಯಿಂದ ಪಡೆಯಬಹುದು. ಇದು ಇ ಮತ್ತು ಏ ಜೀವಸತ್ತ್ವಗಳ ಭಾಗ ಸಹ ಹೌದು. ಫೈಟಾಲ್ ನಾಲ್ಕು ಅಪಕರ್ಷಿತ ಐಸೊಪ್ರೀನ್ ಮಾನಗಳ ಸಾಂದ್ರೀಕರಣದಿಂದ ಉತ್ಪತ್ತಿಯಾಗುತ್ತದೆ ಎನ್ನಬಹುದು. ನೈಸಗಿಕ ಫೈಟಾಲ್ ಅತ್ಯಲ್ಪ ದ್ಯುತಿಪಟುತ್ವವನ್ನು ಪ್ರದರ್ಶಿಸುತ್ತದೆ. ನೆಟಲ್ ಸಸ್ಯದಿಂದ (ಮುಳ್ಳಿರುವ ಒಂದು ಜಾತಿಯ ಸಸ್ಯ) ಬಲಮುರಿ ಫೈಟಾಲನ್ನು ಬೇರ್ಪಡಿಸಲಾಗಿದೆ. ಅಬೆಯಿಟಿಕ್ ಆಮ್ಲ ಚಕ್ರೀಯ ಡೈ ಟರ್ಪೀನುಗಳಿಗೆ ಉದಾಹರಣೆ. ಟ್ರೈ ಟರ್ಪೀನುಗಳಿಗೆ ಸ್ಕ್ವಾಲೀನ್ ಒಂದು ಉದಾಹರಣೆ. ಇದನ್ನು ಷಾರ್ಕ್‍ಮೀನಿನ ಪಿತ್ತಕೋಶದ ಎಣ್ಣೆಯಿಂದ ಪ್ರತ್ಯೇಕಿಸಲಾಗಿದೆ. ಇದು ಆರು ದ್ವಿಬಂಧಗಳಿರುವ ಅಚಕ್ರೀಯ ಸಂಯುಕ್ತ.

	ಟರ್ಪಿನಾಯ್ಡುಗಳ ಜೈವಿಕ ಸಂಶ್ಲೇಷಣೆ: ನೈಸರ್ಗಿಕ ಟರ್ಪೀನುಗಳ ರಚನೆಯ ಆಧಾರದ ಮೇಲೆ ಇವು ಐಸೊಪ್ರೀನ್ ಮಾನಗಳಿಂದ ರೂಪಿತವಾಗಿರಬೇಕು ಎಂದು ತಾತ್ತ್ವಿಕವಾಗಿ ನಿರೀಕ್ಷಿಸಬಹುದು. ಇದನ್ನೇ ಜೈವಿಕ ಜನಿತ ಐಸೊಪ್ರೀನ್ ನಿಯಮ ಎಂದು ಕರೆಯಲಾಗಿದೆ. ಪ್ರಾಣಿಗಳಲ್ಲಿ ಕೊಲೆಸ್ಟೀರಾಲಿನ ಜೈವಿಕ ಸಂಶ್ಲೇಷಣೆಗೆ ಅಸಿಟೈಲ್ ಕೋಎನ್‍ಜೈಮ್ ಎ (ಅಸಿಟೈಲ್ ಕೋ ಎ) ಎಂಬುದು ಪ್ರಾರಂಭ ವಸ್ತು. ಟರ್ಪೀನ್ ಆದ ಸ್ಕ್ವಾಲೀನ್ ಒಂದು ಮಧ್ಯವರ್ತಿ. ಅಂದರೆ ಟರ್ಪೀನುಗಳ ಸಂಶ್ಲೇಷಣೆಯ ಮೂಲವಸ್ತು ಅಸಿಟೈಲ್ ಕೋ ಎ ಎಂದಾಯಿತು. ಹಲವು ವರ್ಷಗಳ ಪರಿಶ್ರಮದ ಅನಂತರ ಸ್ಕ್ವಾಲೀನ್ ಸಂಶ್ಲೇಷಣೆಯ ಪಥದಲ್ಲಿ ಮ್ಯವಲೋನಿಕ್ ಆಮ್ಲ ಮುಖ್ಯವಾದ ಮಧ್ಯವರ್ತಿ ಎಂದು ತಿಳಿದು ಬಂದಿತು. ಇದು 5 ಇಂಗಾಲ ಪರಮಣುಗಿಳಿರುವ ಐಸೊಪ್ರಿನಾಯ್ಡ್ ಮಾನವನ್ನು ಉತ್ಪಾದಿಸುತ್ತದೆ. ಈ ಮಾನದ ಬಹ್ವಂಗೀಕರಣ (ಪಾಲಿಮರೈಸೇಷನ್) ಮತ್ತು ಬಹು ಐಸೊಪ್ರಿನಾಯ್ಡ್‍ಗಳ ಚಕ್ರೀಕರಣ (ಸೈಕ್ಲೈಸೆಷನ್) ಟರ್ಪೀನುಗಳ ಸಂಶ್ಲೇಷಣೆಗೆ ಹಾದಿ.

	ಬಹುಐಸೊಪ್ರಿನ್ ಸರಣಿಗಳ ಉತ್ಪತ್ತಿ: ಅಸಿಟೈಲ್ ಕೋಎಯಿಂದ ಪ್ರಾರಂಭಿಸಿ ಮ್ಯವಲೋನಿಕ್ ಆಮ್ಲದ ಉತ್ಪತ್ತಿಯ ಪಥ ಹೀಗಿದೆ:

	3 ಅಸಿಟೈಲ್ ಕೋ ಎ(ಅಸಿಟೋ ಅಸಿಟೈಲ್ ಕೋ ಎ(ಬೀಟ ಹೈಡ್ರಾಕ್ಸಿ ಬೀಟ ಮೀಥೈಲ್ ಗ್ಲೂಟರೈಟ್ ಕೋ ಎ(ಮ್ಯವಲೋನಿಕ್ ಅಮ್ಲ.

	ಅಮೈನೋ ಆಮ್ಲ ಲ್ಯೂಸೀನ್ ಸಹ ಮ್ಯೆವಲೋನಿಕ್ ಆಮ್ಲವನ್ನು ಕೊಡಬಲ್ಲುದು. ಆದರೆ ಈ ಮಾರ್ಗ ಅಷ್ಟೇನೂ ಮುಖ್ಯವಾದದ್ದಲ್ಲ. ಮ್ಯವಲೋನಿಕ್ ಆಮ್ಲ ಮೂರು ಬಾರಿ ಫಾಸ್ಫರೀಕರಣಕ್ಕೆ ಒಳಗಾಗಿ ಅದೇ ವೇಳೆಯಲ್ಲಿ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸಿ (3 ಐಸೊಪೆಂಟಿನೈಲ್ ಪೈರೊಫಾಸ್ಫೇಟಾಗಿ ಪರಿವರ್ತಿತವಾಗುತ್ತದೆ. 

ಚಿತ್ರ-5

ಇದು ಪುನವ್ರ್ಯವಸ್ಥಿತವಾಗಿ ಸಮಾಂಗಿಯಾದ 3,3 ಡೈಮೀಥೈಲ್ ಅಲೈಲ್ ಪೈರೊಫಾಸ್ಫೇಟಾಗುತ್ತದೆ. ಇದೇ ಜೈವಿಕ ಜನಿತ ಪಟುತ್ವಶಾಲಿ ಐಸೊಪ್ರಿನ್ ಮಾನ. ಡೈಮೀಥೈಲ್ ಅಲೈಲ್ ಪೈರೊಫಾಸ್ಫೇಟಿನ ಬಾಲ ಐಸೊಪೆಂಟಿನೈಲ್ ಪೈರೊಫಾಸ್ಪೇಟಿನ ತಲೆಯ ಭಾಗದೊಂದಿಗೆ ಸಾಂದ್ರೀಕರಿಸಿ ಜೆರನೈಲ್ ಪೈರೊಫಾಸ್ಫೇಟನ್ನು ಕೊಡುತ್ತದೆ. (ಚಿತ್ರ 5).

	ಜೆರನೈಲ್ ಪೈರೋಫಾಸ್ಫೇಟ್ ಇನ್ನೊಂದು ಐಸೊಪೆಂಟಿನೈಲ್ ಪೈರೊಫಾಸ್ಫೇಟಿನೊಂದಿಗೆ ಸಾಂದ್ರೀಕರಿಸಿ (ತಲೆ-ಬಾಲ) ಫಾರ್ನಿಸೈಲ್ ಪೈರೊಫಾಸ್ಫೇಟನ್ನು ಉತ್ಪಾದಿಸುತ್ತದೆ. (ಇದರಲ್ಲಿ 15 ಇಂಗಾಲದ ಪರಮಾಣುಗಳಿರುತ್ತವೆ). ಇದು ಸೆಸ್ಕ್ವಿ ಟರ್ಪೀನುಗಳ ಮೂಲವಸ್ತು. (ಚಿತ್ರ 6) ಬಹ್ವಂಗೀಕರಣ ಮುಂದುವರಿದು 20 ಇಂಗಾಲ ಪರಮಾಣುಗಳಿರುವ ಜೆರಾನೈಲ್ ಜೆರಾನೈಲ್ ಪೈರೊಫಾಸ್ಫೇಟ್ ಉತ್ಪತ್ತಿಯಾಗುತ್ತದೆ. 

ಚಿತ್ರ-6

ಇದು ಡೈಟರ್ಪೀನ್ ಮತ್ತು ಕೆರೋಟಿನಾಯ್ಡುಗಳ ಜನಕವಸ್ತು. ನೈಸರ್ಗಿಕ ರಬ್ಬರಿನ ಸಂಶ್ಲೇಷಣೆಯಲ್ಲಿ ಬಹ್ವಂಗೀಕರಣ ಅನಂತವಾಗಿ ನಡೆಯುತ್ತದೆ. ಯುಬಿಕ್ಷಿನೋನ್ ಮತ್ತು ಪ್ಲಾಸ್ಟೊಕ್ಷಿನೋನುಗಳ ಪಾಶ್ರ್ವ ಸರಣಿಯಲ್ಲಿರುವ ಐಸೊಪ್ರಿನಾಯ್ಡುಗಳ ಉತ್ಪತ್ತಿಯಲ್ಲಿ ಸಹ ಬಹ್ವಂಗೀಕರಣ ಗಮನೀಯ ಪ್ರಮಾಣದಲ್ಲಿ ನಡೆಯುತ್ತದೆ. ಇವೆರಡು ಅಪವಾದಗಳ ವಿನಾ ಸಾಮಾನ್ಯವಾಗಿ ಬಹ್ವಂಗೀಕರಣ ಹತ್ತು, ಹದಿನೈದು, ಇಪ್ಪತ್ತು ಇಂಗಾಲ ಪರಮಾಣುಗಳುಳ್ಳ ಸಂಯುಕ್ತಗಳನ್ನು ಮುಟ್ಟಿದಾಗ ನಿಲ್ಲುತ್ತದೆ. ಇವೆಲ್ಲ ಐಸೊಪ್ರಿನಾಯ್ಡ್ ಮಾನಗಳ ತಲೆ-ಬಾಲ ಸಾಂದ್ರೀಕರಣದಿಂದ ಉತ್ತತ್ತಿಯಾಗುತ್ತವೆ.

	ಟ್ರೈ ಟರ್ಪೀನುಗಳು (ಅ30 ) ಮತ್ತು ಕೆರೋಟಿನಾಯ್ಡುಗಳ (ಅ40) ಇಂಗಾಲದ ಶ್ರೇಣಿಗಳು ಎರಡು ತಲೆ-ಬಾಲ ಶ್ರೇಣಿಗಳ ನಡುವೆ ಬಾಲ-ಬಾಲ ಬಂಧದಿಂದ ಉತ್ಪತ್ತಿಯಾಗುತ್ತವೆ. ಈ ಸಂಶ್ಲೇಷಣೆಯ ಪ್ರಥಮ ಕ್ರಿಯೆಯಾಗಿ ಫಾರ್ನಿ ಸೈಲ್ ಪೈರೊಫಾಸ್ಫೇಟ್ ಸಮಾಂಗೀಕರಣಕ್ಕೆ ಒಳಗಾಗಿ ನೆರೋಲಿಡಾಲ್ ಪೈರೊ ಫಾಸ್ಫೇಟನ್ನು ಕೊಡುತ್ತದೆ. ಫಾರ್ನಿಸೈಲ್ ಪೈರೊಫಾಸ್ಫೇಟಿನ ಒಂದು ಅಣು ಮತ್ತು ನೆರೋಲಿಡಾಲ್ ಪೈರೊಫಾಸ್ಫೇಟಿನ ಒಂದು ಅಣು ಸಾಂದ್ರೀಕರಿಸಿ ಸ್ಕ್ವಾಲೀನನ್ನು ಕೊಡುತ್ತವೆ. ಸ್ಕ್ವಾಲೀನ್ ಟ್ರೈಟರ್ಪೀನುಗಳ ಮತ್ತು ಅವುಗಳ ಅಪಚಯ ವಸ್ತು ಕೊಲೆಸ್ಟೀರಾಲಿನ ಮೂಲವಸ್ತು (ನೋಡಿ- ಕೊಲೆಸ್ಟಿರಾಲ್). ಇದೇ ರೀತಿ ಅ20-ಅ20 ಸಾಂದ್ರೀಕರಣದ ಫಲವಾಗಿ ಕೆರೋಟಿನಾಯ್ಡುಗಳು ಉತ್ಪತ್ತಿಯಾಗುತ್ತವೆ. ಫೈಟೋಯಿನ್ ಈ ಪಥದಲ್ಲಿರುವ ಮೊದಲನೆಯ ವಸ್ತು ಎಂದು ನಂಬಲಾಗಿದೆ.

	ಟರ್ಪೀನುಗಳ ಉತ್ಪತ್ತಿ: ಬಹು ಐಸೊಪ್ರಿನಾಯ್ಡ್ ಪೈರೊಫಾಸ್ಫೇಟುಗಳು ಜಲವಿಶ್ಲೇಷಣೆಗೆ ಒಳಗಾಗಿ ಪ್ರಾಥಮಿಕ ಆಲ್ಕೊಹಾಲುಗಳನ್ನು (ಉದಾಹರಣೆಗೆ ಜೆರನಿಯಾಲ್) ಅಥವಾ ಅವುಗಳ ಸಮಾಂಗಿಗಳನ್ನು (ಉದಾಹರಣೆಗೆ ಲಿನಲೂಲ್) ಕೊಡುತ್ತವೆ. ಬದಲಾಗಿ ಚಕ್ರೀಕರಣದಿಂದ ಸರಳ ಮತ್ತು ಕ್ಲಿಷ್ಟ ಟರ್ಪೀನುಗಳನ್ನು ಕೊಡಬಹುದು.

	ಮಾನೊಟರ್ಪೀನುಗಳು: ಜೆರಾನೈಲ್ ಪೈರೊಫಾಸ್ಫೇಟೆನಿಂದ ಅಚಕ್ರೀಯ ಮೈಸಿಲಿಯಾನಮೈಡ್, ಚಕ್ರೀಯ ಆಲ್ಫ-ಪೈನೀನ್, ಸಿನಿಯೋಲ್, ಥುಜೋನ್ ಇತ್ಯಾದಿ ಮಾನೊಟರ್ಪೀನುಗಳು ಉತ್ಪತ್ತಿಯಾಗುತ್ತವೆ ಎಂದು ಊಹಿಸಲಾಗಿದೆ.

	ಸೆಸ್ಕ್ವಿ ಟರ್ಪೀನುಗಳು: ಕ್ಲಿಷ್ಟ ಸಂಯುಕ್ತಗಳಾದ ನೈಸರ್ಗಿಕ ಸೆಸ್ಕ್ವಿ ಟರ್ಪೀನುಗಳು ಫಾರ್ನಿಸೈಲ್ ಪೈರೊಫಾಸ್ಫೇಟಿನಿಂದ ಚಕ್ರೀಕರಣದ ಫಲವಾಗಿ ದೊರೆಯುತ್ತವೆ. ಇಂಥ ಸಂಯುಕ್ತಗಳಿಗೆ ಬಿಸಬೋಲಿನ್, ಟ್ರೈಕೋಥಿಕೊಲೋನ್, ಕ್ಯಾಡಿನಿನ್ ಮತ್ತು ಹ್ಯೂಮಲೀನುಗಳನ್ನು ಉದಾಹರಿಸಬಹುದು.

	ಚಕ್ರೀಯ ಡೈಟರ್ಪೀನುಗಳು: ಜೆರನೈಲ್ ಜೆರನೈಲ್ ಪೈರೊಫಾಸ್ಫೇಟಿನಿಂದ ಜಿಬರೆಲ್ಲಾ ಜಾತಿಯ ಸಸ್ಯದಲ್ಲಿ ಕಾರೀನ್, ಕಾರಿನೋಲೈಡ್, ಹಾರ್ಮೋನ್ ಆದ ಜಿಬರೆಲ್ಲಿಕ್ ಆಮ್ಲ ಇವು ಉತ್ತತ್ತಿಯಾಗುತ್ತವೆ ಎಂದು ತೋರಿಸಲಾಗಿದೆ.

	ಟ್ರೈಟರ್ಪೀನುಗಳು: ಸ್ಕ್ವಾಲೀನ್ ಒಂದು ಬಗೆಯ ಚಕ್ರೀಕರಣಕ್ಕೆ ಒಳಗಾಗಿ ಲಾನೊಸ್ಟೀರಾಲನ್ನು ಕೊಡುತ್ತದೆ. ಇದು ವಿಶಿಷ್ಟವಾಗಿ ಪ್ರಾಣಿಗಳಲ್ಲಿ ಮತ್ತು ಕೀಳುಮಟ್ಟದ ಸಸ್ಯಗಳಲ್ಲಿ ನಡೆಯುತ್ತದೆ. ಉನ್ನತಮಟ್ಟದ ಸಸ್ಯಗಳಲ್ಲಿ ಚಕ್ರೀಕರಣ ಬೇರೊಂದು ವಿಧವಾಗಿ ನಡೆದು ಸೋಯ ಸೋಪೋಜಿನಾಲ್ ಅಥವಾ ಲೂಪಿಯಾರ್ ಬಗೆಯ ಸಂಯುಕ್ತಗಳು ಜನಿಸುತ್ತವೆ.
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ